ಎಕರ್‍ಮಾನ್, ಯೋಹಾನ್ ಪೇಟರ್
	1792-1854. ಜರ್ಮನಿಯ ಪ್ರಸಿದ್ಧ ವಿದ್ವಾಂಸ ಮತ್ತು ಲೇಖಕ. ಗಯಟೆಕವಿಯ ಆಪ್ತಕಾರ್ಯದರ್ಶಿಯಾಗಿ ಬಹುಕಾಲ ಕೆಲಸಮಾಡಿದನಲ್ಲದೆ ಅವನೊಡನೆ ತಾನು ನಡೆಸಿದ ಸಂಭಾಷಣೆಗಳ ಅಮೂಲ್ಯ ವಸ್ತುಗಳನ್ನೊಳಗೊಂಡ ಗ್ರಂಥವನ್ನು ಬರೆದ. ಜನನ ವಿನ್ಸನ್ ಹಾನೊವರ್‍ನಲ್ಲಿ. ಕಾರ್ಪಣ್ಯ ಜೀವನ ನಡೆಸಿದವ. ಸ್ವಾತಂತ್ರ್ಯ ಯುದ್ಧದಲ್ಲಿ ಭಾಗವಹಿಸಿದ ಅನಂತರ ಯುದ್ಧಖಾತೆಯಲ್ಲೆ ಗುಮಾಸ್ತನಾಗಿ ಇದ್ದ. ಏತನ್ಮಧ್ಯೆ ಒಂದು ವರ್ಷ ಕಾಲ ಗೊಟ್ಟಿನ್ ಚೆನ್‍ನಲ್ಲಿ ವಿದ್ಯಾಭ್ಯಾಸ ಮಾಡಿದ. 1821ರಲ್ಲಿ ಒಂದು ಕವನ ಸಂಕಲನ ಪ್ರಕಟಿಸಿದ. 1823ರಲ್ಲಿ ಗಯಟೆಯ ದೃಷ್ಟಿಗೆ ಬಿದ್ದ. ಅನಂತರ ಗಯಟೆಯ ಆಹ್ವಾನದ ಮೇರೆ ವೀಮಾರ್‍ಗೆ ಬಂದು ಅವನ ಸಾಹಿತ್ಯ ಚಟುವಟಿಕೆಗಳಿಗೆ ಸಹಾಯಕನಾಗಿ ನಿಂತ. ಕೆಲಕಾಲ ಡ್ಯೂಕನ ಮೊಮ್ಮಗನಿಗೆ ಉಪಾಧ್ಯಾಯನಾಗಿಯೂ ಇದ್ದ.

	ಈತ ಪ್ರಸಿದ್ಧನಾಗಿರುವುದು ಗಯಟೆ ಕವಿಯನ್ನು ಕುರಿತ ತನ್ನ ಗ್ರಂಥದಿಂದ (ಕಾನ್ವರ್ಸೇಶನ್ಸ್ ವಿತ್ ಗಯಟೆ). ಇದರಲ್ಲಿ ಗಯಟೆ ಮಹಾಕವಿಯ ಬಹು ಮುಖವಾದ ವಿಚಾರಧಾರೆಯ ಸೆಲೆಗಳನ್ನು ಗುರುತಿಸಬಹುದು. ಗಯಟೆಯ ಅನಂತರ ಆತನ ಅಪ್ರಕಟಿತ ಕೃತಿಗಳನ್ನು ಬೆಳಕಿಗೆ ತರಲು ಎಕರ್‍ಮಾನ್ ಬಹುವಾಗಿ ನೆರವಾದ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ